Tuesday, March 10, 2015

ನಂದಿದ ಜ್ಯೋತಿಯಲ್ಲಿ ತಮ್ಮ ಚಳಿ ಕಾಯಿಸಿಕೊಳ್ಳುತಿದ್ದಾರೆಯೇ ??

ಮನೆಯ ಬಡತನದ ಅಂಧಕಾರವನ್ನು ದೂರಿಕರಿಸಿ ಮನೆಗೆ ಬೆಳಕಾಗಬೇಕಿದ್ದ ಜ್ಯೋತಿ, ತಮ್ಮ ಮನೆಯನ್ನು ಬೆಳಕಾಗಿಸುತ್ತಾಳೆ ಎಂದು ಹಂಬಲಿಸಿ ತಮ್ಮೆಲ್ಲ ಕಷ್ಟಗಳನ್ನು ಮರೆತು ಆ ಜ್ಯೋತಿಯ ಭವಿಷ್ಯ ಪ್ರಜ್ವಲವಾಗಿ ಬೆಳಗಲಿ ಎಂದು ಹಗಲಿರುಳೂ ಕನಸುಕಂಡ ತಂದೆತಾಯಿಯ ಭಗ್ನಗೊಂಡ ಕನಸು. ತಮ್ಮಿಂದಾದುದು ಅಪರಾದವಲ್ಲ, ಪ್ರಮಾದ.. ರಾತ್ರಿ ೯ ಗಂಟೆಯಾ ಮೇಲೆ ಹುಡುಗಿಯರು ಹೊರಗೆ ಹೋಗುವುದೇ ತಪ್ಪು ಮತ್ತು ಅತ್ಯಾಚಾರವೆಸುಗುವಾಗ ಪ್ರತಿರೋಧಿಸಿದ್ದೆ ತಪ್ಪು ಎಂದು ಹೇಳುವ ಅತ್ಯಾಚಾರಿಯ ಮನ್ಹ ಸ್ಥಿತಿ.. ನಮ್ಮದು ಶ್ರೇಷ್ಠ ಸಂಸ್ಕೃತಿ. ಅಲ್ಲಿ ಹೆಂಗಸರಿಗೆ ಸ್ಥಾನವಿಲ್ಲ ಎನ್ನುವ ಪೊಳ್ಳುವಾದವನ್ನು ಪ್ರತಿಪಾದಿಸುವ ನ್ಯಾಯವಾದಿ.. ಹೀಗೆ ನಿರ್ಭಯ ಅತ್ಯಾಚಾರ ಎನ್ನುವ ಕರಾಳ ಘಟನೆಯ ಸುತ್ತ ಬಿಬಿಸಿ ಮಾಡಿದ ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರದ ಸಂಕ್ಷಿಪ್ತ ನೋಟ. ಈ ಸಾಕ್ಷ್ಯಚಿತ್ರವನ್ನು ಅದೆಷ್ಟು ಮಂದಿ ನೋಡಿದ್ದಾರೋ ಗೊತ್ತಿಲ್ಲ. ಆದರೆ ಸಾಮಾಜಿಕ ತಾಣಗಳಲ್ಲಂತೂ ಇದರದ್ದೇ ಸುದ್ದಿ. ಇದನ್ನು ವಿರೋಧಿಸಿದವರು ಒಂದೆಡೆಯಾದರೆ, ಇದು ವಸ್ತುನಿಷ್ಠ ಮತ್ತು ನೈಜ ಪರಿಸ್ಥಿತಿಯನ್ನು ಬಿಂಬಿಸಿದೆ ಎಂದು ಹೇಳುವ ಇನ್ನೊಂದು ವರ್ಗ. ಕೆಲವರು ಸ್ವಂತ ನಿಲುವಿನಿಂದ ಹೇಳಿದರೆ ಇನ್ನು ಕೆಲವರು ಬೇರೆಯವರ ನಿಲುವನ್ನೇ ತಮ್ಮ ನಿಲುವೆಂದು ತೂರ್ಪಡಿಸುವವರದೊಂದು ವರ್ಗ. ಇದೊಂದು ಅಂತರರಾಷ್ಟ್ರೀಯ ಹುನ್ನಾರ ಎಂದು ಹೇಳುವ ಕೇಂದ್ರ ಸಚಿವರು. ಹೀಗೆ ಪರ-ವಿರೋಧಗಳ ನಡುವೆಯೂ ನಾನು ಕಂಡಂತೆ ಕೆಲವು ವಸ್ತುನಿಷ್ಠ ಸಂಗತಿಗಳ ಜೊತೆಜೊತೆಗೆ ಕೆಲವು ಲೋಪದೋಷಗಳು, ಆಕ್ರೋಶ ಮತ್ತು ಅಸಹನೀಯತೆಯನ್ನು ಹುಟ್ಟುಹಾಕಬಲ್ಲ ಅಂಶಗಳೂ ಇವೆ. ನಾನು ಕಂಡಂತೆ ನನಗೆ ಗೋಚರಿಸಿದ ಕೆಲವು ಅಂಶಗಳು ಈ ರೀತಿ ಇದೆ. ೧) ಶೀರ್ಷಿಕೆ - ಇಂಡಿಯಾಸ್ ಡಾಟರ್ ಎನ್ನುವ ಶೀರ್ಷಿಕೆಯೆ ತುಂಬಾ ಸಾರ್ವತ್ರೀಕರಿಸಲಾಗಿದೆ. ಬಿಬಿಸಿ ಹೆಸರಿಟ್ಟಂತೆ ಭಾರತದ ಎಲ್ಲಾ ಹೆಣ್ಣುಮಕ್ಕಳ ಪರಿಸ್ಥಿತಿ ನಿರ್ಭಯ ತರಹ ಇಲ್ಲ. ಹಾಗೆಂತ ಎಲ್ಲ ಗಂಡಸರು ಅತ್ಯಾಚಾರಿಗಳು, ಲೈಂಗಿಕ ಉಪಟಳವನ್ನು ಕೊಡುವವರೂ ಅಲ್ಲ. ಹಾಗೆ ನೋಡಿದರೆ ವಿಚಾರವಾದಿ ಎನಿಸಿಕೊಂಡ ನಮ್ಮ ಬೆಂಗಳೂರಿನ 'ಇಂಡಿಯಾಸ್ ಡಾಟರ್' ಒಬ್ಬರು ಈ ನಿರ್ಭಯ ಘಟನೆಯ ಅಪರಾಧಿಗಳಲ್ಲಿ ಒಬ್ಬನಾದ ಬಾಲಾಪರಾಧಿಗೆ ಶಿಕ್ಷೆ ಕೊಡಬಾರದು ಎಂದು ಮಾದ್ಯಮಗಳಲ್ಲಿ ಚರ್ಚಿಸಿದ್ದು ಈ ಶೀರ್ಷಿಕೆಗೆ ಅಭಾಸವುಂಟುಮಾಡಿದ ಅನುಭವವನ್ನು ಕೊಡುತ್ತದೆ. (https://www.youtube.com/watch?v=wH_wMxZYyss) ೨) ಅಪರಾಧಿ ಮುಕೇಶನ ಮಾತುಗಳಲ್ಲಿ ಕಂಡುಬಂದ ನಿರ್ಲಿಪ್ತತೆ ಮತ್ತು ತನ್ನ ತಂಡ ಮಾಡಿದ ಅಪರಾಧವನ್ನು ಸಮರ್ಥಿಸುವ ನಿಲುವು ಹಾಗೂ ಹಿಂದೆ ಅತ್ಯಾಚಾರ ಮಾಡಿದ ಶ್ರೀಮಂತರಿಗೇಕೆ ಶಿಕ್ಷೆ ಕೊಡಲಿಲ್ಲ ಎನ್ನುವ ಪ್ರಶ್ನೆ... ಇವೆಲ್ಲವೂ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅಣಕವಾಡುವಹಾಗಿತ್ತು. ೩) ಇನ್ನೂ ಅಸಹ್ಯವಾಗಿ ಗೋಚರಿಸುವುದು ಅಪ್ರಭುದ್ದ ಹೇಳಿಕೆಗಳನ್ನು ಕೊಟ್ಟ ಇಬ್ಬರು ನ್ಯಾಯವಾದಿಗಳು. 'ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ:' ಎನ್ನುವ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಒಂದೇ ವಾಕ್ಯದಲ್ಲಿ ಕೊಲೆ ಮಾಡಿದಾತ ನಿಜವಾಗಿಯೂ ಈ ಅತ್ಯಾಚಾರಿಗಳಷ್ಟೇ ಅಪರಾಧಿಸ್ಥಾನದಲ್ಲಿ ನಿಲ್ಲಲ್ಪಡುತ್ತಾನೆ. ೪) ಇನ್ನು ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ.. ಅಪರಾಧ ಘಟಿಸಿ ವರ್ಷಗಳೇ ಕಳೆದರೂ ಇನ್ನೂ ಶಿಕ್ಷಿಸದೆ ಅನ್ನ ಹಾಕಿ ಅಪರಾಧಿಗಳನ್ನುಪೋಷಿಸುತ್ತಿರುವುದು. ೫) ಅತ್ಯಾಚಾರಿಯ ಸಂದರ್ಶನಕ್ಕಾಗಿ ಬಿಬಿಸಿ ಆತನಿಗೆ ೪೦೦೦೦ ರೂಪಾಯಿ ಲಂಚ ಕೊಟ್ಟಿದೆ ಎನ್ನುವ ಅಂಶವೂ ಕೂಡ ಆಘಾತಕಾರಿಯಾಗಿದೆ. ಹಾಗೆ ನೋಡಿದರೆ ಬಿಬಿಸಿ ಇನ್ನು ಯಾರ್ಯಾರಿಗೆ ಎಷ್ಟು ಲಂಚ ಕೊಟ್ಟಿರಬಹುದು ಎನ್ನುವುದು ನಮ್ಮ ಊಹನೆಗಷ್ಟೇ ಸೀಮಿತವಾಗಿರಲಿ. ಒಟ್ಟಿನಲ್ಲಿ ಪರ-ವಿರೋಧ , ತಪ್ಪು-ಒಪ್ಪು, ಒಳ್ಳೆಯದು-ಕೆಟ್ಟದ್ದು ಇವುಗಳ ನಡುವೆಯೂ ಈ ಸಾಕ್ಷ್ಯಚಿತ್ರದಿಂದ ನಾವು ಅರಿತು ಕಲಿಯಬೇಕಾದ್ದು ಬಹಳಷ್ಟಿದೆ. ಬಡತನ , ಶಿಕ್ಷಣದ ಕೊರತೆ , ಮಾರ್ಗದರ್ಶನದ ಕೊರತೆ , ನಿರುದ್ಯೋಗ ಇವುಗಳು ಅತ್ಯಾಚಾರಕ್ಕೆ ಕಾರಣವಾಗುವ ಅಂಶಗಳು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟ . ಹಾಗೆಂತ ಶಿಕ್ಷಿತ ಶ್ರೀಮಂತರು ಅತ್ಯಾಚಾರ ಮಾಡುವುದಿಲ್ಲವೆಂದು ಅದರ ಅರ್ಥವಲ್ಲ . ಬಹುಮುಖ್ಯವಾಗಿ ನೈತಿಕ ಶಿಕ್ಷಣದ ಕೊರತೆಯೆ ಮೂಲಕಾರಣವೆನ್ನಬಹುದು. ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಮೂಲಶಿಕ್ಷಣದ ಜೊತೆಗೆ ನೈತಿಕ ಮತ್ತು ಮೌಲ್ಯ ಶಿಕ್ಷಣವು ಕದ್ದಾಯವಾದಾಗ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸ್ತ್ರೀಯೋಬ್ಬಳನ್ನು ಕಂಡಾಗ ತನ್ನ ತಾಯಿಯನ್ನೊ ಸಹೋದರಿಯನ್ನೊ ಅರೆಗಳಿಗೆ ನೆನೆಸಿಕೊಂಡರೆ ಪರಿಸ್ಥಿತಿ ಸುಧಾರಿಸಬಹುದೇನೋ ?!!

No comments:

Post a Comment