Thursday, March 12, 2015

ಮೇರು ಕಲೆ ಯಕ್ಷಗಾನ ಬೇರು ಬಿಡಬಾರದಲ್ಲಾ???

ನಿನ್ನೆ ನನಗೊಂದು ಫೋನ್ ಕಾಲ್ ಬಂದಿತ್ತು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಸಾಂಸ್ಕೃತಿಕ ಸಮಿತಿಯವರಂತೆ. ಸಿನೆಮಾ ಹಾಡಿಗೆ ಯಕ್ಷಗಾನ ಸ್ಟೆಪ್ಸ್ ಕಲಿಸಬೇಕೆಂದು ನನ್ನಲ್ಲಿ ಕೇಳಿದರು. ಕಲಿಸುವುದಕ್ಕೆ ಆಗುವ ಸಂಭಾವನೆಯಂತೂ ಇದ್ದೇ ಇದೆ. ಆದರೇ... ಹಾಕುವುದು ತಪ್ಪಾಂಗುಚಿ ಸಿನೆಮಾ ಹಾಡು ಮತ್ತು ಕುಣಿಯುವುದು ಯಕ್ಷಗಾನದ ನೃತ್ಯ. ಅದೂ ಯಕ್ಷಗಾನದ ವೇಷದಲ್ಲಿ. ಬೆಂಗಳೂರಲ್ಲೂ ನುರಿತ -ಅನುಭವಿ ಯಕ್ಷಗಾನ ನಾಟ್ಯ ಗುರುಗಳಿದ್ದಾರೆ. ಬೇಕಾದರೆ ಯಾರನ್ನಾದರೂ ಸಮರ್ಥ ಗುರುವನ್ನು ನಿಮಗೆ ಕಳುಹಿಸುತ್ತೇನೆ. ಪೂರ್ಣ ಪ್ರಮಾಣದ ಯಕ್ಷಗಾನವನ್ನೇ ಮಾಡಿ ಅಂತ ಹೇಳಿದೆ. ಆದರೆ ಅವರಿಗೆ ಸಮಯದ ಅಭಾವ ಮತ್ತು ಸಿನೆಮ ಹಾಡಿಗೆ ಯಕ್ಷಗಾನ ನೃತ್ಯ ಎಲ್ಲೋ ನೋಡಿದ್ದ ಅವರಿಗೆ ಅದೇ ಬೇಕಾಗಿತ್ತು ಇದು ಸಾಧ್ಯವಿಲ್ಲ ಮತ್ತು ಯಕ್ಷಗಾನವನ್ನು ಈ ರೀತಿ ತೋರಿಸುವುದಕ್ಕೆ ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಇಷ್ಟೆಲ್ಲಾ ಆದ ಮೇಲೆ ನನ್ನ ಮನಸ್ಸಿಗೇನೋ ಕಸಿವಿಸಿಯ ಅನುಭವ. ಯಕ್ಷಗಾನದ ಈ ಸ್ಥಿತಿಗೆ ಯಾರು ಕಾರಣ? ಕಾಟಾಚಾರಕ್ಕೆ ಸಾಂಪ್ರದಾಯಿಕ ನೃತ್ಯಗಳು ಬೇಕು ಎನ್ನುವ ಸಾಂಸ್ಕೃತಿಕ ಘಟಕಗಳದ್ದೋ ? ಯಕ್ಷಗಾನವನ್ನು ಒಂದು ೧೦ ನಿಮಿಷದ ಸಿನೆಮ ಹಾಡಿಗೆ ಕುಣಿಸಿ ತಮ್ಮ ಜೇಬು ಬೆಚ್ಚಗೆ ಮಾಡೋಣ ಎನ್ನುವ ಸೊ ಕಾಲ್ಡ್ ಯಕ್ಷಗಾನ ಗುರುಗಳದ್ದೋ? ಅಲ್ಲ ಇಂತಹ ಕಾರ್ಯಕ್ರಮಗಳಿಗೆ ವೇಷಭೂಷಣಗಳನ್ನುಒದಗಿಸುವರೋ? ಯಕ್ಷಗಾನ ಕಲೆಗೆ ತನ್ನದೇ ಆದ ಅಯಸ್ಕಾಂತೀಯ ಶಕ್ತಿ ಇದೆ. ಯಕ್ಷಗಾನ ವೇಷ ಧರಿಸಿಕೊಂಡ ವ್ಯಕ್ತಿಗೆ ಏನೂ ಗೊತ್ತಿಲ್ಲದಿದ್ದರೂ ಜನರನ್ನು ತನ್ನೆಡೆಗೆ ಆಕರ್ಷಿಸುವ ಶಕ್ತಿ ಆ ಯಕ್ಷಗಾನದ ವೇಷಕ್ಕಿದೆ. ಆದರೆ ಅದರ ದುರುಪಯೋಗವೇ ಹೆಚ್ಚು-ಹೆಚ್ಚು ಆಗುವುದು ಯಕ್ಷಗಾನ ಕಲೆಗೊಂದು ಹಿನ್ನಡೆ ಎಂದರೂ ತಪ್ಪಾಗಲಾರದು. ಯಕ್ಷಗಾನದ ಈ ಆಕರ್ಷಣೀಯ ವೇಷಭೂಷಣವನ್ನು ಸಿನೆಮಾ ಮತ್ತು ಧಾರಾವಾಹಿಗಳ ಹೀರೋ -ಹೀರೋಯಿನ್ ಗಳ ಹಿಂದೆ ಕುಣಿಸುವುದು, ಮೆರವಣಿಗೆಗಳಲ್ಲಿ ನಡೆಸಿಕೊಂಡು ಹೋಗುವುದು, ಸಭೆ-ಸಮಾರಂಭಗಳಲ್ಲಿ ಅತಿಥಿಗಳನ್ನು ಸ್ವಾಗತಿಸಲು ಬಳಸುವುದು ಇತ್ಯಾದಿ ಇತ್ಯಾದಿಯಾಗಿ ಅನೇಕ ರೀತಿಗಳಲ್ಲಿ ನಮ್ಮ ಕಣ್ಣೆದುರೇ ದುರುಪಯೋಗವಾಗುತ್ತಿರುವುದು ಖೇದಕರ. ಯಕ್ಷಗಾನ ಒಂದು ಸ್ವತಂತ್ರವಾದ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ಕಲೆ. ನರ್ತನ, ಗಾಯನ, ವಾದನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ಪ್ರಪಂಚದ ಏಕಮಾತ್ರ ರಂಗಭೂಮಿಯ ಕಲಾಪ್ರಕಾರ. ಯಕ್ಷಗಾನಕ್ಕೆ ತನ್ನದೇ ಆದ ಪರಂಪರೆಯಿದೆ, ಶಾಸ್ತ್ರೀಯ ನೆಲೆಗಟ್ಟಿದೆ. ಹೇಗೆ ಎಲ್ಲೆಂದರಲ್ಲಿ ಮಾಡುವ ಬೀದಿನಾಟಕ, ಆರ್ಕೆಸ್ಟ್ರಾಗಳ ಹಾಗೆ ಯಕ್ಷಗಾನವನ್ನು ಮಾಡುವ ಹಾಗಿಲ್ಲ. ಹಾಗೆ ನಾವು ಯಕ್ಷಗಾನವನ್ನು ಆಧುನಿಕತೆಯ ನೆಪದಲ್ಲಿ ಪ್ರೇಕ್ಷಕರಿಗೆ ಬೇಕಾದ ಹಾಗೆ ಬದಲಾಯಿಸಿದಲ್ಲಿ ಅದರ ಮೌಲ್ಯ ಕಳೆದುಹೋಗುವುದರಲ್ಲಿ ಸಂಶಯವಿಲ್ಲ. ಯಕ್ಷಗಾನವು ಯಕ್ಷಗಾನದ ರೂಪದಲ್ಲೇ ಉಳಿಯಬೇಕಾದರೆ ನಮ್ಮನ್ನು ನಾವೇ ಪ್ರಶ್ನಿಸಿ, ತರ್ಕಿಸಿ ಅದಕ್ಕೊಂದು ಸರಿಯಾದ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಹಾಗೆಯೇ ಯಕ್ಷಗುರುಗಳು ಕೂಡ ಸಿನೆಮಾ ಹಾಡುಗಳಿಗೆ ಕುಣಿಸುವ ಪ್ರಸ್ತಾಪಗಳು ಬಂದರೆ ಖಡಾಖಂಡಿತವಾಗಿ ನಿರಾಕರಿಸಬೇಕು. ವೇಷಭೂಷಣಗಳನ್ನು ಒದಗಿಸುವವರು ಸಹ ಒಂದು ಸಲ ಹಣದ ಮುಖ ನೋಡದೆ ಯಕ್ಷಗಾನದ ಶಾಸ್ತ್ರಿಯ ಹಿನ್ನಲೆ ಮತ್ತು ಪರಂಪರೆಯನ್ನು ಅರೆಗಳಿಗೆ ಚಿಂತಿಸಿ ಇಂತಹ ಕಾರ್ಯಗಳಿಗೆ ವೇಷಭೂಷಣಗಳನ್ನು ಕೊಡದಿದ್ದರೆ ಯಕ್ಷಗಾನಕ್ಕೆ ಒಳಿತು.

1 comment:

  1. ಸರಿಯಾಗಿ ಹೇಳಿದಿರಿ ಅವಿನಾಶಣ್ಣ..

    ReplyDelete