Saturday, May 9, 2015

ಯಕ್ಷಗಾನ ಮತ್ತು ಸಾಮಾಜಿಕ ಜಾಲತಾಣಗಳು


ಸಾಮಾಜಿಕ ಜಾಲತಾಣಗಳು ವಿಚಾರ-ವಿನಿಮಯ, ವಿಮರ್ಶೆ, ಮನರಂಜನೆ , ಕೆಲವೊಮ್ಮೆ ಹಾಳು-ಹರಟೆ ಹೇಗೆ ಹಲವು ವಿಚಾರಗಳಿಗೆ ಉತ್ತಮ ವೇದಿಕೆಯಾಗಿ ನಮ್ಮ ನಿತ್ಯಜೀವನದ ಭಾಗವೇ ಆಗಿ ಹೋಗಿದೆ. ಚಿತ್ರ, ದೃಶ್ಯ, ಶ್ರಾವ್ಯ ಹೀಗೆ ಹತ್ತಾರು ರೂಪಗಳಲ್ಲಿ ಒಬ್ಬರಿಂದೊಬ್ಬರಿಗೆ ಪಸರಿಸುತ್ತಾ ಜ್ಞಾನ ಭಂಡಾರವನ್ನು ವಿಸ್ತರಿಸುವ ಕೆಲಸವೂ ಇದರಿಂದಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಕೇವಲ ವ್ಯಾಪಾರ ವ್ಯವಹಾರಕಷ್ಟೇ ಸೀಮಿತವಾಗಿರದೆ ನಮ್ಮ ಯಕ್ಷಗಾನ ಕ್ಷೇತ್ರದಲ್ಲೂ ವ್ಯಾಪಕವಾಗಿ ಕಂಡುಬರುತ್ತಿದೆ. ಚೌಕಿಮನೆಗೆ ಹೋಗಿ ಹುಡುಕಿ ಮಾತನಾಡಿಸುತ್ತಿದ್ದ ಕಲಾವಿದರು ನೇರ ಫೇಸ್ಬುಕ್ನಲ್ಲೋ ವಾಟ್ಸ್ ಅಪ್ನಲ್ಲೋ ಮಾತಿಗೆ ಸಿಗುತ್ತಾರೆ. ರಂಗಸ್ಥಳ, ಸಿಡಿ/ಡಿವಿಡಿಗಳಲ್ಲಿ ಕಾಣಿಸುತ್ತಿದ್ದ ಯಕ್ಷಗಾನ ಜಾಲತಾಣಗಳ ಮುಖಾಂತರ ತತ್ ಕ್ಷಣದಲ್ಲಿ ವಿಶ್ವದ ಮೂಲೆ ಮೂಲೆಗು ತಲುಪುತ್ತಿದೆ. ಕಲಾವಿದರ ವಿವಿಧ ಭಂಗಿಯ ಚಿತ್ರಗಳು, ಯಕ್ಷಗಾನದ ವಿಭಿನ್ನ ದೃಶ್ಯಗಳು, ಭಾಗವತರ ಹಾಡಿನ ತುಣುಕುಗಳು ಕ್ಷಣಮಾತ್ರದಲ್ಲಿ ಸ್ವತಂತ್ರವಾಗಿ ಒಬ್ಬರಿಂದೊಬ್ಬರಿಗೆ ಹರಡುತ್ತವೆ. ಇದರ ಜೊತೆಯಲ್ಲೇ ಚೌಕಿಯ ಡೇರೆಗಷ್ಟೇ ಸೀಮಿತವಾದ ಅನೇಕ ವಿಚಾರಗಳು (ಚೌಕಿ ರಾಜಕೀಯ!!!) ಕೂಡ ಹರಡುವುದು ಸಾಮಾನ್ಯವಾಗಿದೆ. ಇವೆಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಾಮಾಜಿಕ ಜಾಲತಾಣಗಳ ಇತ್ತೀಚಿಗಿನ ಬೆಳವಣಿಗೆಗಳು ಯಕ್ಷಗಾನಕ್ಕೆ ಪೂರಕವೋ ಅಥವಾ ಮಾರಕವೋ ಎನ್ನುವುದು ಚರ್ಚಾರ್ಹ ವಿಷಯ. ಈ ಚರ್ಚೆಯನ್ನು ಬದಿಗಿರಿಸಿ ಜಾಲತಾಣಗಳನ್ನು ಉಪಯೋಗಿಸುವ ಕಲಾವಿದರ ಮತ್ತು ಕಲಾಭಿಮಾನಿಗಳ ಮೂಲ ಕರ್ತವ್ಯಗಳನ್ನು ಅವಲೋಕಿಸುವುದು ಒಳಿತು.


ಜಾಲತಾಣಗಳು ಮತ್ತು ಕಲಾವಿದ
• ನಿಮ್ಮ ಫೇಸ್ಬುಕ್ ಅಥವಾ ಇನ್ನಾವುದೇ ಜಾಲತಾಣದ ಖಾತೆಯನ್ನು ಸಕಾರಾತ್ಮಕವಾಗಿ ಉಪಯೋಗಿಸಿ. ನಿಮ್ಮ ಹೆಸರಿನಲ್ಲಿ ನಿಮ್ಮ ಅಭಿಮಾನಿಗಳು/ಸಂಬಂಧಿಕರು/ಮಕ್ಕಳು ಖಾತೆ ಹೊಂದಿದ್ದಲ್ಲಿ ಅವರು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ನಿಗಾ ವಹಿಸಿ
• ಚೌಕಿಯಲ್ಲಿ ಛಾಯಾಚಿತ್ರ ತೆಗೆಯುವಾಗ ಆ ಚಿತ್ರಗಳನ್ನು ನೀವು ನೋಡಿ. ಕೆಲವೊಮ್ಮೆ ಅಪೂರ್ಣ ವೇಷಭೂಷಣಗಳಿಂದ ಕೊಡಿದ ಯಾ ಅರೆನಗ್ನ ಚಿತ್ರಗಳು ಅಶ್ಲೀಲವಾಗಿ ಕಾಣಿಸಿ ನಿಮ್ಮ ಗೌರವಕ್ಕೆ ಧಕ್ಕೆ ತರಬಲ್ಲುದು.
• ನಿಮ್ಮ ನಾಟ್ಯ, ಮಾತುಗಾರಿಕೆ, ಪಾತ್ರ ಪೋಷಣೆ ಬಗ್ಗೆ ಎಚ್ಚರಿಕೆ ವಹಿಸಿ. ಹೆಚ್ಚಿನ ದೃಶ್ಯಗಳು ಯುಟ್ಯೂಬ್ ಮೊದಲಾದವುಗಳಲ್ಲಿ ದಾಖಲೀಕರಣವಾಗಿ ವಿಶ್ವಾದಾದ್ಯಂತ ಕಲಾರಸಿಕರು ನೋಡುತ್ತಾರೆ ಎಂಬುದು ನಿಮಗೆ ಗೊತ್ತಿರಲಿ.
• ಕೇವಲ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿರುವ ಹಿಂಬಾಲಕರ ಸಂಖ್ಯೆಯನ್ನು ಮಾನದಂಡವನ್ನಾಗಿಸಿ ತಾನು ಇನ್ನೋರ್ವ ಕಲಾವಿದನಿಗಿಂತ ಹೆಚ್ಚು ಯಾ ಕಮ್ಮಿ ಎನ್ನುವ ಮನೋಭಾವ ಬೇಡ. ಇಲ್ಲಿರುವ ಹಿಂಬಾಲಕರ ಸಂಖ್ಯೆ ನಿಮ್ಮಲ್ಲಿರುವ ಕಲೆಯ ನೈಜ ಅಭಿಮಾನದ ಸಂಕೇತ ಅಲ್ಲ.

ಜಾಲತಾಣಗಳು ಮತ್ತು ಕಲಾಭಿಮಾನಿ
• ಕಲಾವಿದರ ಹೆಸರಿನಲ್ಲಿ ಮಾಡುವ ಯಾವುದೇ ಜಾಲತಾಣಗಳ ಖಾತೆ ಅಥವಾ ಅವರ ಅಭಿಮಾನಿ ಸಂಘಗಳೆಂದು ಮಾಡುವ ಖಾತೆಗಳ ಬಗ್ಗೆ ಮೊದಲು ಕಲಾವಿದರಲ್ಲಿ ಚರ್ಚಿಸಿ, ಅವರ ಒಪ್ಪಿಗೆ ಮತ್ತು ಮಾರ್ಗದರ್ಶನ ಪಡೆಯಿರಿ
• ಕೆಲವೊಮ್ಮೆ ಅಂಧಾಭಿಮಾನದಿಂದ ತಾವು ಹರಡುವ ವಿಚಾರಗಳು ಕಲಾವಿದರ ನಡುವೆ ವೈಷಮ್ಯ ಬೆಳೆಯುವಂತೆ ಮಾಡಬಲ್ಲುದು. ಹಾಗಾಗಿ ವಿಚಾರ ಹರಡುವ ಮೊದಲು ಯೋಚಿಸಿ.
• ಅರೆನಗ್ನ ಚಿತ್ರಗಳು, ಅಶ್ಲೀಲತೆಯನ್ನು ಬಿಂಬಿಸುವ ಚಿತ್ರಗಳನ್ನು ತೆಗೆದು ಹರಡುವುದರಿಂದ ಕಲೆಯ ಮತ್ತು ಕಲಾವಿದನ ಗೌರವಕ್ಕೆ ಧಕ್ಕೆಯಾಗುತ್ತದೆ ಎಂಬುದು ನೆನಪಿರಲಿ
• ಕಪೋಲಕಲ್ಪಿತ ಕಥೆಗಳು, ಆಧಾರರಹಿತ ಸುದ್ದಿಗಳು ( ಉದಾ: ಕಲಾವಿದರು ಮೇಳ ಬಿಡುವ ಬಗ್ಗೆ ಮತ್ತು ಅದಕ್ಕೆ ಕಾರಣಗಳು) ಹರಿಯಬಿದುವುದರಿಂದ ಅನಪೇಕ್ಷಿತ ವಿವಾದ ಸೃಷ್ಟಿಯಾಗುವುದರಿಂದ ಅಂತಹ ವಿಚಾರಗಳನ್ನು ಹರಿಯಬಿಡಬೇಡಿ
• ಕಲಾವಿದರು ತಪ್ಪು ಮಾಡಿದರೆ, ಅದು ನಿಮಗೆ ಸ್ಪಷ್ಟವಾಗಿ ತಪ್ಪು ಮತ್ತು ಯಾವುದು ಸರಿ ಎಂದು ಗೊತ್ತಿದ್ದರೆ ಅವರಲ್ಲೇ ಹೇಳಿ. ಸುಮ್ಮನೆ ವಿಮರ್ಶೆ ಎಂಬ ಹೆಸರಲ್ಲಿ ಸಾಮಾಜಿಕ ತಾಣಗಳಲ್ಲಿ ಹಾಕಿ ಕಲಾವಿದರ ಆತ್ಮಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಿ
• ಕಲಾವಿದರ ಮತ್ತು ಕಲೆಯ ಹೆಸರು ಹೇಳಿಕೊಂಡು ತಮ್ಮ ಸ್ವಾರ್ಥಕ್ಕೆ ಅವರನ್ನು ಬಲಿಕೊಡಬೇಡಿ

ಅಭಿಮಾನಿಗಳು ಮತ್ತು ಕಲಾವಿದರ ನಡುವಿನ ಕೊಂಡಿಯಾಗಿರುವ ಸಾಮಾಜಿಕ ಜಾಲತಾಣಗಳು ಜ್ಞಾನದ ಅರಿವನ್ನು ಹಂಚಿಕೊಳ್ಳಲು, ಕಲೆಯ ಮತ್ತು ಕಲಾವಿದನ ಧನಾತ್ಮಕ ಅಂಶಗಳನ್ನು ಪಸರಿಸಲು, ಜೊತೆಗೆ ನಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಬಳಸುವ ವೇದಿಕೆಯಾಗಬೇಕು. ಇಂತಹ ವೇದಿಕೆಗಳು ಸೃಜನಶೀಲ ಆಲೋಚನೆಗಳನ್ನು ನೀಡುವ ಮತ್ತು ಮನಸ್ಸುಗಳನ್ನು ಬೆಸೆಯುವ ತಾಣಗಳಾಗಬೇಕೆ ಹೊರತು ದ್ವೇಷ ಬಿತ್ತುವ ಕೇಂದ್ರಗಳಾಗದಂತೆ ನಾವು ನೋಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಕಾರಾತ್ಮಕ ಅನಿಸಿಕೆ-ಅಭಿಪ್ರಾಯಗಳನ್ನು ನೀಡುತ್ತಾ, ಯಾವುದೇ ವ್ಯಕ್ತಿಯ ತೇಜೋವಧೆಗೆ ಇಳಿಯದೆ ಯಕ್ಷಗಾನದ ಚಿತ್ರ, ದೃಶ್ಯ, ಶ್ರಾವ್ಯ ಮೊದಲಾದುವುಗಳನ್ನು ಪಸರಿಸುತ್ತ ಹೋದರೆ ಯಕ್ಷಗಾನವು ವಿಶ್ವಗಾನವಾಗಬಹುದು.

No comments:

Post a Comment